ಬ್ಯಾಲೆ
	ಮೂಕಾಭಿನಯ, ಸಂಗೀತ, ನೃತ್ಯ, ರಂಗಸ್ಥಳದ ಅಲಂಕರಣಗಳ ಮೂಲಕ ಕಥೆಯನ್ನು ಮುನ್ನಡೆಸುವ ವಿಶೇಷ ತಂತ್ರ ಮತ್ತು ಕೌಶಲಗಳಿಂದ. ಕೂಡಿದ ರಂಗಭೂಮಿಯ ಒಂದು ಶಾಸ್ತ್ರೀಯ ನೃತ್ಯಪ್ರಕಾರ. ಬ್ಯಾಲೆ ಫ್ರೆಂಚ್ ಶಬ್ದ, ಇದರ ಅರ್ಥ ನೃತ್ಯ. ಇಟಾಲಿಯನ್ನಿನ ಬ್ಯಾಲೇರ ಎಂಬುವನಿಂದ ಈ ಪದ ಬಳಕೆಗೆ ಬಂದಿದೆ. ಈ ನೃತ್ಯ ವಿಧಾನ ಅಮೆರಿಕ ಸಂಯುಕ್ತಸಂಸ್ಥಾನ, ಫ್ರಾನ್ಸ್, ಜರ್ಮನಿ, ರಷ್ಯಾ, ಸ್ಪೇಯಿನ್, ಪೋಲೆಂಡ್, ಇಟಲಿ, ಡೆನ್ಮಾರ್ಕ್, ಸ್ವೀಡನ್, ಜಪಾನ್, ಥೈಲೆಂಡ್, ಭಾರತ ಮುಂತಾದ ದೇಶಗಳಲ್ಲಿ ಪ್ರಸಿದ್ಧಿಯಲ್ಲಿದೆ.

	ಬ್ಯಾಲೆಯ ಉದಯ 14ನೆಯ ಶತಮಾನದ ಮಧ್ಯಭಾಗ ಎನ್ನಬಹುದು. ಆಗ ಇಟಲಿಯಲ್ಲಿ ನವೋದಯದ ಕಾಲ. ವ್ಯಾಪಾರ ವಾಣಿಜ್ಯೋದ್ಯಮಗಳು ವ್ಯಾಪಕವಾಗಿ ವಿಕಾಸವಾದಂತೆ ಕಲೆ-ಕಸುಬುಗಳೂ ಅಭಿವೃದ್ಧಿ ಹೊಂದಿದುವು. ಎಲ್ಲಕ್ಕೂ ರಾಜಧಾನಿ ಕೇಂದ್ರವೆನಿಸಿತು. ಆ ಸಮಯದಲ್ಲಿ ಆಡಳಿತ ನಡೆಸುತ್ತಿದ್ದ ಡ್ಯೂಕ್ ಕುಟುಂಬದವರು ಬಲು ದುಬಾರಿಯಾದ ಮತ್ತು ಮನಸೊ ಇಚ್ಛೆ ಮನರಂಜನೆಯನ್ನು ತಮ್ಮ ಸಭಾಂಗಣದಲ್ಲಿ ವ್ಯವಸ್ಥೆ ಮಾಡತೊಡಗಿದರು. ಇದರಿಂದ ಹತ್ತಾರು ವಿಧದ ನೃತ್ಯಗಳು ನಡೆಯುತ್ತಿದ್ದವು. ಇಂಥ ನೃತ್ಯಗಳಲ್ಲಿ ಸಮಾಜದ ಮೇಲ್ವರ್ಗದ ಜನರೇ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದರು. 1547ರಲ್ಲಿ ಫ್ಲಾರೆನ್ಸ್ ನಗರದ ಆಡಳಿತ ಕುಟುಂಬದವಳಾದ ಕ್ಯಾತರೀನ್ ಫ್ರಾನ್ಸಿನ ಎರಡನೆಯ ಹೆನ್ರಿಯನ್ನು ಮದುವೆಯಾಗಿ ರಾಣಿಯಾಗಿ ಬಂದಳು. ಅವಳು ಸ್ವತಃ ಉತ್ತಮ ನೃತ್ಯಗಾರ್ತಿಯಾಗಿದ್ದಳು. ಫ್ರೆಂಚ್ ರಾಜಭವನದಲ್ಲಿ ಇಟಲಿಯಲ್ಲಿ ನಡೆಯುತ್ತಿದ್ದ ರೀತಿಯ ನೃತ್ಯ ರೂಢಿಸಬೇಕೆಂದು ಆಕೆ ಸಹಜವಾಗಿ ಬಯಸಿದಳು. ಇದಕ್ಕಾಗಿ ಇಟಲಿಯಿಂದಲೇ ಮುಖ್ಯ ಸಂಗೀತಗಾರನನ್ನು ಕರೆಸಿಕೊಂಡಳು. ಆತನ ಹೆಸರು ಬಾಲ್ಥಜಾರ್ ಡಿ ಬ್ಯೂಜಾಯಲಕ್ಸ್. ಆತ ನೃತ್ಯರಚನಕಾರನೂ (ಕೋರಿಯಾಗ್ರಫರ್) ಆಗಿದ್ದ. 1581ರಲ್ಲಿ ರಾಜಕುಟುಂಬದ ವಿವಾಹ ಸಂದರ್ಭದಲ್ಲಿ ಐದೂವರೆತಾಸಿನ ಅದ್ಭುತ ನೃತ್ಯ ಪ್ರದರ್ಶನ ಮೆಡಿಸಿಯ ಆಸ್ಥಾನದಲ್ಲಿ ನಡೆಯಿತು. ಇದನ್ನು ಆತ ರಾಣಿಯ ವಿನೋದ ಬ್ಯಾಲೆ ಎಂದು ಕರೆದ. ಬ್ಯಾಲೆಯ ಇತಿಹಾಸಕಾರರ ಪ್ರಕಾರ ಇದು ಮೊದಲ ಬ್ಯಾಲೆ. ಮುಂದೆ 1600ರಲ್ಲಿ ಫ್ರಾನ್ಸಿನ ರಾಜನಾಗಿದ್ದ ಹದಿನಾಲ್ಕನೆಯ ಲೂಯಿ ಸ್ವತಃ ನೃತ್ಯಗಾರನೂ ಲಲಿತ ಕಲೆಗಳ ಪ್ರಿಯನೂ ಅವುಗಳ ಬೆಳೆವಣಿಗೆಯಲ್ಲಿ ಬಲು ಆಸಕ್ತಿವುಳ್ಳವನೂ ಆಗಿದ್ದುದರಿಂದ ಬ್ಯಾಲೆಯ ಬೆಳೆವಣಿಗೆಗೆ ವಿಶೇಷ ಪ್ರೋತ್ಸಾಹ ನೀಡಿದ. ಅದರ ಪ್ರದರ್ಶನ ಪ್ರಸಾರಗಳಿಗೆ ಬೊಕ್ಕಸದಿಂದ ಹೇರಳ ಹಣ ಖರ್ಚುಮಾಡಿದ. ಈ ನೃತ್ಯಪ್ರಕಾರವನ್ನು ಕ್ರಮಬದ್ಧವಾಗಿ ವ್ಯವಸ್ಥಿತವಾಗಿ ಕಲಿಯುವ ಸಲುವಾಗಿ ರಾಯಲ್ ಅಕಾಡೆಮಿ ಆಫ್ ಡಾನ್ಸಿಂಗ್ ಎಂಬ ಶಾಲೆಯನ್ನೇ ತೆರೆದ (1661). ಅಲ್ಲಿಂದಲೇ ವೃತ್ತಿನಿರತ ಬ್ಯಾಲೆ ಮೇಳಗಳ ಉಗಮವಾದುದು. ಆತನಕ ಹೆಂಗಸರಿಗೆ ಅವಕಾಶ ಕಡಿಮೆ ಇದ್ದ ಈ ನೃತ್ಯದಲ್ಲಿ ಲೂಯಿ ಈ ಶಾಲೆಯ ಮೂಲಕ ಅವರಿಗೂ ಅವಕಾಶ ಒದಗಿಸಿಕೊಟ್ಟ. 1681 ಮೇ 16 ಅವರಿಗೆ ಅವಕಾಶ ದೊರೆತು, ಜೀನ್ ಬ್ಯಾಸ್ಟಿಸ್ಟ್ ಲುಲ್ಲಿ ಎಂಬ ರಚನಕಾರನ ಬ್ಯಾಲೆ ಪ್ರದರ್ಶನದಲ್ಲಿ ಮೊದಲಬಾರಿಗೆ ನಾಲ್ವರು ನೃತ್ಯಗಾರ್ತಿಯರು ಭಾಗವಹಿಸಿ ಯಶಸ್ವಿಯಾದರು ಮತ್ತು ಬ್ಯಾಲೆಯ ಮುಂದಿನ ರೋಮಾಂಚಕ ಬೆಳವಣಿಗೆಗೆ ಅಡಿಪಾಯ ಹಾಕಿದರು. ಶಾಸ್ತ್ರೀಯ ಬ್ಯಾಲೆ ನೃತ್ಯ ತಂತ್ರದ ವ್ಯವಸ್ಥಿತ ಕಲಿಕೆ ಫ್ರಾನ್ಸಿನಲ್ಲಿ ಪ್ರಾರಂಭವಾದುದರಿಂದ ಇದರ ಹಲವಾರು ಹೆಜ್ಜೆ, ಆಯ, ಆಕಾರಗಳಿಗೆ ಫ್ರೆಂಚ್ ಶಬ್ದಗಳೇ ಇಂದಿಗೂ ಬಳಕೆಯಲ್ಲಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	ತರುವಾಯ ಬ್ಯಾಲೆ ಕಲಿಸುವ ಮತ್ತು ಪ್ರದರ್ಶಿಸುವ ದೊಡ್ಡ ದೊಡ್ಡ ಸಂಸ್ಥೆಗಳು ಇಟಲಿ, ರಷ್ಯಾ, ಡೆನ್ಮಾರ್ಕ್, ಇಂಗ್ಲೆಂಡುಗಳಲ್ಲಿ ಪ್ರಾರಂಭವಾದುವು. ಯೂರೊಪಿನ ಇತರ ದೇಶಗಳಲ್ಲೂ ಬ್ಯಾಲೆ, ಮೇಳಗಳು ಅಸ್ತಿತ್ವಕ್ಕೆ ಬಂದುವು. ಅವುಗಳ ಪೈಕಿ 1783ರಲ್ಲಿ ಪೀಟರ್ಸ್‍ಬರ್ಗಿನಲ್ಲಿ ಪ್ರಾರಂಭವಾದ ರಷ್ಯದ ಇಂಪಿರಿಯಲ್ ಬ್ಯಾಲೆ ಕಂಪನಿ ಇಂದಿಗೂ ತನ್ನ ಸತ್ವ ಹಾಗೂ ಪ್ರಯೋಗದಿಂದಾಗಿ ಪ್ರಸಿದ್ಧವಾಗಿದೆ.

	ಸ್ತ್ರೀಯರಿಗೆ ನೃತ್ಯದಲ್ಲಿ ಅವಕಾಶ ದೊರೆತ ಮೇಲೆ ಮೇರಿ ಕಮಾರ್ಗೋ ಎಂಬವಳಿಂದ ಬ್ಯಾಲೆ ಹೊಸ ತಿರುವು ಪಡೆಯಿತು. ತನ್ನ ನೃತ್ಯ, ಭಾವ-ಭಂಗಿಗಳಿಂದ, ವೇಷಭೂಷಣಗಳಿಂದ ಹಾಗೂ ಅಪೆರಾದಿಂದ ಬ್ಯಾಲೆಯನ್ನು ಪ್ರತ್ಯೇಕಿಸಿದ ಈಕೆ ಫ್ರಾನ್ಸಿನ ಮೊತ್ತಮೊದಲ ಬ್ಯಾಲೆ ಕಲಾವಿದೆ 1721ರಲ್ಲಿ ಇವಳ ಮೊದಲ ಬ್ಯಾಲೆ ಪ್ರದರ್ಶನವಾಯಿತು. ಈಕೆ ನೃತ್ಯಕ್ಕೆ ಅನುಕೂಲವಾಗುವಂತೆ ಲಂಗದ ಉದ್ದವನ್ನು ಕಡಿಮೆಮಾಡಿ, ಪಾದರಕ್ಷೆಯ ಹಿಮ್ಮಡಿಗೂಟವನ್ನು ತೆಗದುಹಾಕಿ, ಪದಗತಿಯಲ್ಲಿ ನಾನಾರೀತಿಯ ವೈವಿಧ್ಯಮಯವಾದ ಹೆಜ್ಜೆಗಾರಿಕೆಯ ತಂತ್ರವನ್ನೂ ನೃತ್ಯಗತಿಯಲ್ಲಿ ಸ್ವಾತಂತ್ರ್ಯವನ್ನೂ ರೂಢಿಗೆ ತಂದು ಬ್ಯಾಲೆಗೆ ಹೊಸತಿರುವು ನೀಡಿದಳು. ಗಾಳಿಯಲ್ಲಿ ಹಾರುವಿಕೆ, ಜಿಗಿಯುವಿಕೆ, ತೇಲುವಿಕೆ ಇವೆಲ್ಲ ಇವಳ ಅದ್ಭುತ ಕೊಡುಗೆಗಳು. ಅದೇ ಸಮಯದಲ್ಲಿದ್ದ ಜೀನ್ ಜಾರ್ಜ್ ನೊವೇರೆ ಎಂಬಾತನೂ ಬ್ಯಾಲೆಗೆ ಹೊಸ ಅಯಾಮ ನೀಡಿದ. ಸಾಂಪ್ರದಾಯಿಕವಾಗಿ ಪ್ರದರ್ಶಿತವಾಗುತ್ತಿದ್ದ ಬ್ಯಾಲೆ ಪದ್ಧತಿಯನ್ನು ಶಾಸ್ತ್ರೀಯವಾಗಿ ವಿಮರ್ಶೆಗೆ ಒಳಪಡಿಸಿದ ವ್ಯಕ್ತಿ ಈತ. ಅಲ್ಲಿಂದ ಮುಂದೆ, ಶರೀರದ ಅಂಗಾಗಗಳು ಮತ್ತು ಮುಖ ಭಾವಗಳ ಮೂಲಕ ರಸಭಾವಗಳನ್ನು ಪ್ರದರ್ಶಿಸುವ ಪದ್ಧತಿ ಹೆಚ್ಚಾಗಿ ಬಳಕೆಗೆ ಬಂದು, ಕೌಶಲದ ಕಡೆಗೆ ಹೆಚ್ಚಿನ ಕೃಷಿ ನಡೆಯತೊಡಗಿತು. ನೊವೇರೆಯಿಂದ ನೃತ್ಯಾಭಿನಯಗಳ ಮೂಲಕ ಕಥೆಯನ್ನು ಮುನ್ನಡೆಸುವಲ್ಲಿಯೂ ಹೊಸತನ ರೂಢಿಗೆ ಬಂದಿತು.

	ರೊಮ್ಯಾಂಟಿಕ್ ಬ್ಯಾಲೆಯ ಉಗಮ: ನೊವೇರೆಯ ಬ್ಯಾಲೆಯ ಕಥೆಗಳು ಹೆಚ್ಚಾಗಿ ಗ್ರೀಕ್ ಪುರಾಣ ಮತ್ತು ನಾಟಕಗಳಿಂದ ಆಯ್ದುಕೊಂಡವು. ಇವನ್ನು ಆ ಕಾಲದ ಜನ ಮತ್ತು ನೃತ್ಯಗಾರರು ಅಷ್ಟಾಗಿ ಇಷ್ಟಪಡಲಿಲ್ಲ. ಆ ಹೊತ್ತಿಗೆ ಬ್ಯಾಲೆಯಲ್ಲಿ ನಾನಾ ರೀತಿಯ ತಂತ್ರಗಳನ್ನು ವಿಸ್ತರಿಸಿ ಪ್ರದರ್ಶಿಸುವ ರೊಮ್ಯಾಂಟಿಕ್ ಯುಗ ಪ್ರಾರಂಭವಾಯಿತು. ಆಗ ನೃತ್ಯಗಾರ್ತಿಯರಿಗೂ ಹೆಚ್ಚಿನ ಅವಕಾಶ ದೊರೆತು ಅವರೂ ತಮ್ಮ ಕೌಶಲ ಮತ್ತು ತಂತ್ರಗಳನ್ನು ಮೆರೆಸತೊಡಗಿದರು. ಗಂಡಸರಿಗಿಂತ ಹೆಚ್ಚಿನ ಪ್ರೋತ್ಸಾಹ ಮತ್ತು ಅವಕಾಶ ಹೆಂಗಸರಿಗೆ ಸಿಗತೊಡಗಿತು. ಮೊದಲ ರೊಮ್ಯಾಂಟಿಕ್ ಬ್ಯಾಲೆಯನ್ನು ಇಟಲಿಯ ಕೋರಿಯಾಗ್ರಫರ್ ಫಿಲಿಪ್ಪೊ ಟಾಗ್ಲಿಯೋನಿ ರಚಿಸಿದ. ಆ ಮೊದಲ ಬ್ಯಾಲೆ ಲಾ ಸಿಲ್ಫಿಡೆ 1832 ಮಾರ್ಚ್ 12ರಂದು ಪ್ರದರ್ಶಿತವಾಯಿತು. ಅವನ ಮಗಳಾದ ಮೇರಿಯ ಟಾಗ್ಲಿಯೋನಿ (1804-84) ಇದರಲ್ಲಿ ಪ್ರಧಾನ ಕಲಾವಿದೆಯಾಗಿ ಸಿಲ್ಫಿಡೆ ಪಾತ್ರದ ಪ್ರದರ್ಶನ ನೀಡಿದಳು. ನೃತ್ಯಗಾರ ಕುಟುಂಬದ ಹಿನ್ನೆಲೆಯಿದ್ದ ಇವಳು ಅಂದಿನ ನೃತ್ಯರೂಪದಲ್ಲಿ ಹತ್ತಾರು ವಿಧದ ಹೊಸತನ ಮೆರೆದು ಮಿಂಚಿದಳು. ವೇಷಭೂಷಣಗಳಲ್ಲಿ ಹೊಸತನ ತಂದಳು. ಕಾಲಬೆರಳ ತುದಿಯ ಮೇಲೆ ಎಷ್ಟು ಹಗುರವಾಗಿ ದೇಹವನ್ನು ನಿಲ್ಲಿಸಲು ತಾನು ಶಕ್ತಳು ಎಂಬುದನ್ನು ತೋರಿಸಿಕೊಟ್ಟಳು. ಕಾಲ್ಬೆರಳ ನೃತ್ಯದಲ್ಲಿ ಇಂದಿಗೂ ಅವಳ ಹೆಸರು ಚಿರಸ್ಥಾಯಿ. ಈ ಅವಧಿಯಲ್ಲಿ ಆಸ್ಟ್ರಿಯಾದೇಶದ ಬ್ಯಾಲೆ ನೃತ್ಯಗಾರ್ತಿ ಫ್ಯಾನಿ ಎಲ್‍ಸ್ಲರ್ ಮನುಷ್ಯನ ಆಳವಾದ ಭಾವನೆಗಳನ್ನು ಮುಖಭಾವ ನಡೆ ನಿಲವುಗಳಲ್ಲಿ ಪ್ರದರ್ಶಿಸಿ ಬ್ಯಾಲೆಯ ಒಂದು ಹೊಸ ಜಗತ್ತನ್ನು ಪರಿಚಯ ಮಾಡಿಸಿದಳು. ಕಾರ್ಲಟ್ಟಾ ಗ್ರಿಸಿ ಸ್ಪಾನಿಷ್ ಮತ್ತು ಸಾಂಪ್ರದಾಯಿಕ ಶೈಲಿ ಅಳವಡಿಸಿ ಅವೆರಡರ ಅಂದಚೆಂದವನ್ನು ಹೊಂದಿಸಿ ಪ್ರದರ್ಶಿಸಿದಳು. ಬ್ಯಾಲೆಯ ಪೂರ್ವಾರ್ಧದಲ್ಲಿ ರೈತನ ಮಗಳೊಬ್ಬಳು ಪ್ರೇಮಕ್ಕಾಗಿ ಸಾಯುವುದು; ಉತ್ತರಾರ್ಧದಲ್ಲಿ ಆ ಹುಡುಗಿಯ ಆತ್ಮ ಪ್ರೇಮಕ್ಕಾಗಿ ತಳಮಳಿಸುವ ನೃತ್ಯ ಅಂದಿನ ಜನರನ್ನು ಮಂತ್ರ ಮುಗ್ಧರನ್ನಾಗಿಸಿತು. ಆಗ ಬ್ಯಾಲೆ ತಂತ್ರ ಕೌಶಲಗಳೊಂದಿಗೆ ರಸಾನುಭವಗಳ ಪ್ರದರ್ಶನದ ಕಡೆಗೂ ದಾಪುಗಾಲು ಹಾಕಿ ಬೆಳೆಯತೊಡಗಿತು. ಸುಮಾರು 19ನೆಯ ಶತಮಾನದ ತನಕವೂ ಪ್ಯಾರಿಸ್ ಬ್ಯಾಲೆ ಪ್ರಥಮ ಸ್ಥಾನದಲ್ಲಿತ್ತು.

	ಬ್ಯಾಲೆ ನೃತ್ಯದ ತಂಡಗಳು ನಾನಾ ದೇಶಗಳಿಗೆ ಹೋಗಿ ಪ್ರದರ್ಶನ ನೀಡಲು ಪ್ರಾರಂಭಿಸಿದ ಮೇಲೆ ಬದಲಾವಣೆಗಳು ಆಗುತ್ತಲೇ ಇವೆ. ದೇಶೀಯ ನೃತ್ಯ ಸಂಪ್ರದಾಯಗಳು ಬ್ಯಾಲೆಯ ಮೇಲೆ ಅಗಾಧ ಪ್ರಭಾವ ಬೀರಿವೆ. ಜನರ ಮನೋಭಾವ, ಪರಿಸರ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಅನುಸರಿಸಿ ಬ್ಯಾಲೆಯಲ್ಲಿ ಹೊಸತು ಕಾಣಿಸಿಕೊಳ್ಳತೊಡಗಿದೆ. ಈಗೀಗ ದೂರದರ್ಶನದಲ್ಲೂ ಚಲನಚಿತ್ರದಲ್ಲೂ ಬ್ಯಾಲೆ ನೋಡಬಹುದಾಗಿದೆ. ಆದರೆ ಅದಕ್ಕೆ ಸರಿಹೊಂದುವ ತಂತ್ರ ಇನ್ನೂ ಬೆಳೆದು ಬಾರದಿರುವುದರಿಂದ ಈ ಮಾಧ್ಯಮ ಕೊಡಬೇಕಾದಷ್ಟು ಫಲ ಕೊಟ್ಟಿಲ್ಲ. ಅಲ್ಲದೆ ಇಂದು ಯಾವ ರಾಷ್ಟ್ರವೂ ಬ್ಯಾಲೆಯ ಕೇಂದ್ರ ಸ್ಥಾನವಾಗಿಲ್ಲ. ಅಮರಿಕನ್ ಬ್ಯಾಲ್ ರಿಯಲಿಸ್ಟಿಕ್ ಆಗಿದ್ದರೆ, ರಷ್ಯಾದ ಬ್ಯಾಲೆ ನಾಟಕೀಯ ಮತ್ತು ಕಮ್ಯುನಿಸಮ್ ತತ್ತ್ವ ಪ್ರಚಾರದತ್ತ ವಾಲುತ್ತಿದೆ. ಆದರೆ ತಂತ್ರ, ಕೌಶಲಗಳು ತುಂಬ ಮುಂದುವರಿದಿವೆ. 1942ರಲ್ಲಿ ಅಂಥೋಣಿ ಟ್ಯು ಡೋರ್ ಎಂಬ ಅಮೆರಿಕದ ಕೋರಿಯಾಗ್ರಫರ್ ಮನಶ್ಯಾಸ್ತ್ರದ ತಳಹದಿಯ ಮೇಲೆ ರಚಿತವಾದ ಪಿಲ್ಲರ್ ಆಫ್ ಫೈರ್ ಎಂಬ ಬ್ಯಾಲೆಯನ್ನು ಪ್ರದರ್ಶಿಸಿದ. ಈ ತನಕದ ಬ್ಯಾಲೆಯ ಇತಿಹಾಸ ಹಾಗೂ ಬೆಳೆವಣಿಗೆಯನ್ನು ಗಮನಿಸಿದಾಗ ಕಾಣಬರುವ ಅಂಶಗಳು ಇವು: ಅಮೆರಿಕದ ಬ್ಯಾಲೆಯ ಶೈಲಿ ಚುರುಕು ಹಾಗೂ ತ್ವರಿತ ಗತಿಯಿಂದ ಕೂಡಿದ್ದರೆ ಬ್ರಿಟಿಷ್ ಬ್ಯಾಲೆಯ ಶೈಲಿ ನಯನಾಜೂಕಿನಿಂದ ಕೂಡಿದೆ. ರಷ್ಯನ್ ಬ್ಯಾಲೆ ಕೃತಕ ಹಾಗೂ ಆಡಂಬರದಿಂದ ಕೂಡಿದ್ದು ಫ್ರೆಂಚ್ ಬ್ಯಾಲೆ ಮನೋಹರವೂ ಅಲಂಕಾರಿಕವೂ ಆಗಿದೆ. ಡ್ಯಾನಿಷ್ ಬ್ಯಾಲೆ ಶೈಲಿ ಚಾಕಚಕ್ಯ ಮತ್ತು ಉಲ್ಲಾಸದಿಂದ ಕೂಡಿದೆ.

	ಅನ್ನಾಪಾವ್ಲೋವ, ವಾಸ್ಲಾವ್ ನಿಜಿನ್‍ಸ್ಕಿ, ಆಲಿಸಿಯಾ ಮಾರ್ಕೋವ್, ಇಗೋರ್ ಯೂಸ್ಕೇವಿಚ್, ಮಾರ್ಗರೆಟ್ ಫಾಂಟೇನ್, ಜೂಲ್ಸ್ ಫೇರೊ ಚಾರ್ಲೇಟ್, ಎಮಿಲಿ, ಆ್ಯನ್, ಅಮೇಲಿಯ ಪರಾರಿ, ಗಲೀನ್ ಉಲನೋವ, ಮಯಾ ಪ್ಲೀ ನೆತ್ ಸ್ಕಯಾ-ಇವರು ಇಪ್ಪತ್ತನೆಯ ಶತಮಾನದ ಬ್ಯಾಲೆಯ ರಚನಕಾರರು ಹಾಗೂ ಕಲಾವಿದರಲ್ಲಿ ಪ್ರಮುಖರು.

	ಬ್ಯಾಲೆ ಶಿಕ್ಷಣ: ಬ್ಯಾಲೆಯಲ್ಲಿ ಪ್ರಾವೀಣ್ಯ ಸಾಧಿಸಲು ಹಲವು ವರ್ಷಗಳ ಕಠಿಣ ಸತತ ಪ್ರಯತ್ನ ಬೇಕು. ಕಲಿಯಲು ಪ್ರಾರಂಭಿಸುವ ವಯಸ್ಸು ಎಂಟು ಅಥವಾ ಹತ್ತು. ಬ್ಯಾಲೆ ಶಾಲೆಗೆ ಸೇರಿಕೊಳ್ಳುವಾಗ ಕಠಿಣ ಪ್ರವೇಶ ಪರೀಕ್ಷೆ ನಡೆಸುತ್ತಾರೆ. ಇಲ್ಲಿ ಮುಖ್ಯವಾಗಿ ವಿದ್ಯಾರ್ಥಿಯ ಆರೋಗ್ಯ ಸ್ಥಿತಿ, ಹೆಜ್ಜೆಗಳ ಬಾಗು, ಮೂಳೆಗಳು ಪ್ರಮಾಣಬದ್ಧವಾಗಿದ್ದು ಅವಶ್ಯಕತೆಗೆ ತಕ್ಕಂತೆ ರೂಪಿಸಲು ಸಾಧ್ಯವೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಉದ್ದ ತೋಳು, ನೀಳ ಕುತ್ತಿಗೆ ಮತ್ತು ಕಾಲು ಬ್ಯಾಲೆಗೆ ಮುಖ್ಯವಾದ ಅಂಗಗಳು. ಪ್ರಾರಂಭದಲ್ಲಿ ವಾರಕ್ಕೆ ಒಂದು ಪಾಠ. ಎರಡು ವರ್ಷಗಳ ಅನಂತರ ದಿನಕ್ಕೊಂದು ಪಾಠ. ಹೀಗೆ ಐದಾರು ವರ್ಷ ಪರ್ಯಂತ ತರಬೇತಿ ನಡೆಯುತ್ತದೆ. ಈ ತರಬೇತಿಗಾಗಿಯೇ ಬ್ಯಾಲೆ ಸ್ಟುಡಿಯೋಗಳಿವೆ. ಅಲ್ಲಿ 'ಬಾರ್ ಗಳ ಸಹಾಯದಿಂದ ಕಾಲು-ಕೈ-ಮೈಗಳನ್ನು ನಾನಾ ಆಕೃತಿಯಲ್ಲಿ ಬಗ್ಗಿಸಲು ಆಯತಪ್ಪದಂತೆ ನಿಲವು ನಡೆಗಳನ್ನು ತಂದುಕೊಳ್ಳಲು ಕಲಿಸಲಾಗುತ್ತದೆ. ಕಲಿಸುವ ಹಿರಿಯ ಉಪಾಧ್ಯಾಯರು, ಬ್ಯಾಲೆ ನರ್ತಕರು ಅಲ್ಲಿ ಇರುತ್ತಾರೆ. ಇಂದು ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ನ್ಯೂ ಜಿಲೇಂಡ್ ಮುಂತಾದ ದೇಶಗಳಲ್ಲಿ ಅಲ್ಲಿಯ ಸರ್ಕಾರಗಳೇ ಕಲಿಯುವವರಿಗೆ ಶಿಷ್ಯವೇತನ ನೀಡಿ ಪ್ರೋತ್ಸಾಹ ನೀಡುತ್ತಿವೆ. ಯೂರೊಪ್ ದೇಶಗಳಲ್ಲಿ ಕೆಲವು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಬ್ಯಾಲೆ ತರಗತಿಗಳನ್ನು ನಡೆಸುತ್ತವೆ. ಆದರೆ ಪ್ರೌಢಾವಸ್ಥೆಗೆ ಬಂದು ಸ್ನಾಯುಗಳು ಬಲಿತ ಮೇಲೆ ಬ್ಯಾಲೆಯ ಕಲಿಯುವಿಕೆ ಕಷ್ಟವಾದುದರಿಂದ ಈ ತರಗತಿಗಳು ಉತ್ತಮ ಬ್ಯಾಲೆ ಪಟುಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿಲ್ಲ. ಬ್ಯಾಲೆಯ ಪ್ರಾರಂಭದಪಾಠ ಕಾಲಿನ ಐದು ಭಂಗಿಗಳು ಅಥವಾ ಪ್ರಮುಖ ಸ್ಥಾನಗಳು. ಇವೇ ಬ್ಯಾಲೆಯ ಆಧಾರಭೂತಭಂಗಿಗಳು. ಮೊದಲನೆಯದು ನೆರ ನಿಂತು ಎರಡೂ ಕಾಲಿನ ಹಿಮ್ಮಡಿಗಳು ಒಂದರ ಪಕ್ಕದಲ್ಲಿ ಇನ್ನೊಂದು ಬರುವಂತೆ ನಿಲ್ಲುವ ಭಂಗಿ. ಹಿಮ್ಮಡಿಗಳ್ನು ನಿಶ್ಚಿತದೂರದಲ್ಲಿರಿಸಿ ಎರಡೂ ಕೈಗಳನ್ನು ಚಾಚುವುದು ಎರಡನೆಯ ಭಂಗಿ. ಮೂರನೆಯದು ಎಡಗಾಲು ಇದ್ದಂತೆಯೇ ಇದ್ದು ಬಲಗಾಲ ಹಿಮ್ಮಡಿ ಎಡಪಾದದ ಮಧ್ಯಕ್ಕೆ ಬರುವಂತೆ ಇಡುವುದು. ನಾಲ್ಕನೆಯದು ಎಡಗಾಲು ಇದ್ದಂತೆಯೇ ಇದ್ದು ಬಲಗಾಲಿನ ಬೆರಳು ಎಡಗಾಲಿನ ಹಿಮ್ಮಡಿಯ ಸಮಕ್ಕೆ ಬರುವಂತೆ ಬಲಗಾಲನ್ನು ಸ್ವಲ್ಪ ಮುಂದಿಟ್ಟುಕೊಳ್ಳುವುದು. ಐದನೆಯದು ಬಲಗಾಲಿನ ಬೆರಳುಗಳು ಎಡಗಾಲಿನ ಹಿಮ್ಮಡಿಗೆ ತಗಲುವಂತೆ ಇಟ್ಟುಕೊಳ್ಳುವುದು. ಈ ಐದು ಭಂಗಿಗಳ ಮೂಲಕ ಸ್ನಾಯುಗಳಿಗೆ ಸರಿಯಾದ ತರಬೇತಿ ದೊರೆತ ಮೇಲೆ ಇನ್ನೂ ಹೆಚ್ಚು ಹೆಚ್ಚು ಕಠಿಣ ಚಲನೆಗಳನ್ನು ಕಲಿಸಲಾಗುತ್ತದೆ. ಮೊದಲ ಮೂರು ವರ್ಷ ಕಾಲು ಬೆರಳಿನ ಮೇಲೆ ನಿಂತು ನರ್ತಿಸುವುದಕ್ಕೆ ಅವಕಾಶ ಕೊಡುವುದಿಲ್ಲ. ಹಾಗೇನಾದರೂ ಅವಕಾಶಕೊಟ್ಟರೆ ಬೆರಳುಗಳು ವಿಕಾರವಾಗಿ, ನೃತ್ಯವೂ ಆಯ ಆಕಾರಬದ್ಧವಾಗದೇ ಹೋಗಬಹುದು. ಇದಕ್ಕೆ ಶಾರೀರಿಕ ಹಾಗೂ ಮಾನಸಿಕ ಬೆಳೆವಣಿಗೆ ಮುಖ್ಯ. ಬ್ಯಾಲೆಯಲ್ಲಿ ಉತ್ತಮ ಯಶಸ್ಸು ಪಡೆಯಲು ಕಟ್ಟುನಿಟ್ಟಾದ ತರಬೇತಿ. ಸಂಗೀತಜ್ಞಾನ ಮತ್ತು ಲಯದ ಮೇಲಿನ ಬಿಗಿಹಿಡಿತ ಅವಶ್ಯ. ವೃತ್ತಿನಿರತ ಬ್ಯಾಲೆ ನರತ್ಯಗಾರರು ಕೂಡ ತಮ್ಮ ಕೌಶಲದ ಅಭಿವೃದ್ಧಿಗಾಗಿ ದಿನವೂ ಅಭ್ಯಾಸ ಮಾಡುತ್ತಾರೆ. ತರಗತಿಗಳು ವೃತ್ತಿನಿರತರಿಗೂ ನಡೆಯುತ್ತವೆ. ಆದರೆ ಅಭ್ಯಾಸದ ರೀತಿ ಬೇರೆ ಬೇರೆ ಅಷ್ಟೆ. ಬ್ಯಾಲೆ ನೃತ್ಯಗಾರರು 20 ವರ್ಷಕ್ಕೆ ವೃತ್ತಿಮೇಳದ ಕಲಾವಿದರಾಗಿ ಮಿಂಚಿ 45ಕ್ಕೆ ನಿವೃತ್ತರಾಗುತ್ತಾರೆ.

	ನಾಟಕ ಕಂಪನಿಗಳಿದ್ದಂತೆ ಬ್ಯಾಲೆ ನೃತ್ಯದ ಮೇಳಗಳಿವೆ. ಸಂಗೀತ, ನೃತ್ಯ, ಅಭಿನಯ, ವೇಷಭೂಷಣ, ರಂಗಾಲಂಕಾರಗಳು ಒಂದೆಡೆ ಮೇಳೈಸಿ ಕಥೆ ಮತ್ತು ರಸಭಾವಕ್ಕೆ ಅನುಗುಣವಾಗಿ ಪ್ರದರ್ಶಿತವಾಗುತ್ತವೆ. ಇದನ್ನು ನರ್ತಕ, ಸಂಗೀತ ರಚನಕಾರ, ನರ್ತನರಚನಕಾರ, ದೃಶ್ಯ ಸಂಯೋಜನಕಾರ, ವೇಷಭೂಷಣಗಳ ತಯಾರಕ ಈ ಎಲ್ಲರೂ ಒಟ್ಟಾಗಿ ಸಿದ್ಧಪಡಿಸುತ್ತಾರೆ. ಇವರಲ್ಲಿ ನರ್ತನರಚನಕಾರ ಬಹಳ ಮುಖ್ಯನಾದವ. ಈತನಿಗೆ ನೃತ್ಯ, ಸಂಗಿತ, ನಿರ್ದೇಶನ, ರಂಗಸಜ್ಜಿಕೆ ಸಾಹಿತ್ಯ ಈ ಎಲ್ಲ ಅಂಶಗಳಲ್ಲಿ ತಿಳಿವಳಿಕೆ ಇರಬೇಕಾಗುತ್ತದೆ. ಇಡೀ ಪ್ರದರ್ಶನದ ಚಿತ್ರ ಈತನ ತಲೆಯಲ್ಲಿ ಮೊದಲೇ ಮೂಡಿರುತ್ತದೆ. ಬ್ಯಾಲೆಯ ವಿವಿಧ ಅಂಗಗಳನ್ನು ಕಲಾತ್ಮಕವಾಗಿ ಒಂದೆಡೆ ವ್ಯವಸ್ಥಿತವಾಗಿ ಕಠಿಣವಾದ ರಂಗತಾಲೀಮು ಕೊಟ್ಟು ಹೊಂದಿಸುವವನೇ ನರ್ತನರಚನಕಾರ (ಕೋರಿಯಾಗ್ರಫರ್), ಬ್ಯಾಲೆಯಲ್ಲಿ ತಂತ್ರ, ಉಡುಗೆ, ತೊಡುಗೆ ಪಾತ್ರ-ಇವುಗಳಿಗೆ ಬಲು ಮಹತ್ತ್ವದ ಸ್ಥಾನವುಂಟು. ಮೂಕಾಭಿನಯವಾದುದರಿಂದ ಮತ್ತು ಸಾಮೂಹಿಕ ನೃತ್ಯ ಕ್ರಿಯೆಗಳಿರುವುದರಿಂದ ವಾತಾವರಣ ನಿರ್ಮಾಣಕ್ಕೆ ನೃತ್ಯಾಭಿನಯಗಳಿಗೆ ಪೋಷಕವಾಗುವ ರಂಗಸಜ್ಜಿಕೆಗೂ ಗಣ್ಯಸ್ಥಾನವಿದೆ. ಇವೆಲ್ಲ ಒಟ್ಟಂದಕ್ಕೆ ಪ್ರೇರಕವಾಗಿರುತ್ತವೆ.

	ಬ್ಯಾಲೆಯಲ್ಲಿ ಇಂತಹದೇ ಸಂಗೀತವನ್ನು ಬಳಸಬೇಕೆಂಬ ನಿರ್ದಿಷ್ಟತೆ ಅಥವಾ ನಿರ್ದುಷ್ಟತೆಗಳಿಲ್ಲ. ಅದು ಸಂಪೂರ್ಣವಾಗಿ ನರ್ತನರಚನಕಾರನನ್ನು ಅವಲಂಬಿಸಿರುತ್ತದೆ. ಮೊದಲು ನರ್ತನರಚನಕಾರ ತನ್ನ ಬ್ಯಾಲೆಯ ನಮೂನೆ ಪರಿಣಾಮಗಳನ್ನು ಅದಕ್ಕೆ ಹೊಂದಿಕೊಂಡು ಬರುವ ನೃತ್ಯದ ಹೆಜ್ಜೆ, ಕೌಶಲ, ಅಭಿನಯ, ರಸಭಾವಗಳನ್ನು ಸಂಗೀತಗಾರನಿಗೆ ವಿವರಿಸುತ್ತಾನೆ. ಅದಕ್ಕೆ ಅನುಗುಣವಾದ ಸಂಗೀತ ರಚನೆ ಸಂಯೋಜನೆ ನಡೆಯುತ್ತವೆ. ಕೆಲವು ಸಂದರ್ಭಗಳಲ್ಲಿ ಪ್ರದರ್ಶನದ ನಡೆ, ಪರಿಣಾಮ ತಿಳಿಸಿ ರಚನೆಯ ಸಂಪೂರ್ಣ ಜವಾಬ್ದಾರಿಯನ್ನು ಸಂಗೀತಗಾರನಿಗೇ ಬಿಡಲಾಗುತ್ತದೆ. ಅನಂತರದಲ್ಲಿ ಬೇಕಾದರೆ ಬದಲಾವಣೆ ಮಾಡಿಕೊಳ್ಳಬಹುದು. ಕೆಲವು ಸಂಗೀತಗಾರರು ತಮ್ಮ ಪ್ರತಿಷ್ಠೆಗೆ ಕುಂದುಬರುತ್ತದೆಂದು ಈ ವ್ಯವಸ್ಥೆಗೆ ಒಪ್ಪುವುದಿಲ್ಲ. ತಾಳವೇ ಪ್ರಧಾನಸ್ಥಾನಪಡೆದಿರುವ ಬ್ಯಾಲೆಯಲ್ಲಿ ಕತೆಯ ವಾತಾವರಣಕ್ಕೆ ತಕ್ಕಂತೆ ನೃತ್ಯಕ್ಕೆ, ಭಾವಪ್ರದರ್ಶನಕ್ಕೆ ಅನುಕೂಲವಾದ ಇಂಪಾದ ಆಕರ್ಷಕ ಸಂಗೀತವಿರುತ್ತದೆ. ಇತ್ತೀಚೆಗೆ ಸಂಗೀತಕ್ಕೆ, ಸ್ವರಪ್ರಸ್ತಾರ ಹಾಕುವ ಕ್ರಮವೂ ಬಳಕೆಗೆ ಬಂದಿದೆ. ಇಗೋರ್ ಸ್ಟ್ರಾವಿನ್‍ಸ್ಕಿಯವರ ದಿ ಫೈರ್ ಬರ್ಡ್ (1910) ಪೆಟ್ರೋಚ್ಚ (1911) ದಿ ರೈಟ್ ಆಫ್ ಸ್ಪ್ರಿಂಗ್ (1913), ಒರ್ ಪಸ್ (1948), ಅಗೋನ್ (1957) ಎರೋನ್ ಕೊಪ್ಲಾಂಡ್ ಮುಂತಾದವು ಅತ್ಯುತ್ತಮ ಬ್ಯಾಲೆ ಸಂಗೀತಗಳೆಂದು ಇಂದಿಗೂ ಪ್ರಸಿದ್ಧವಾಗಿವೆ.

	ಬ್ಯಾಲೆಯ ತಂತ್ರ ಕೌಶಲ ಉಳಿದ ನೃತ್ಯಪ್ರಕಾರಗಳಿಗಿಂತ ವಿಶೇಷವಾದುದು. ಇದರ ಹಲವು ಚಲನೆಗಳು ಶರೀರಕ್ಕೆ ಒಗ್ಗದವು. ಇಲ್ಲಿಯ ಹೆಜ್ಜೆಗಳು ಅತ್ಯಂತ ತೀವ್ರ ಹಾಗೂ ಚುರುಕಾದವು. ಕೆಲವೊಮ್ಮೆ ಅವುಗಳ ವೇಗವನ್ನು ಪ್ರೇಕ್ಷಕರ ಕಣ್ಣುಕೂಡ ಅನುಸರಿಸಲಾರದೇನೋ ಎನಿಸುತ್ತದೆ. ಗಾಳಿಯಲ್ಲಿ ತೇಲುವುದು ತೊನೆಯುವುದು ಹಾರುವುದು ನೆಗೆಯುವುದು ಇತ್ಯಾದಿ ಹತ್ತಾರು ವಿಧಗಳಿವೆ. ನೃತ್ಯ ಮಾಡುವಾಗ ಒಬ್ಬರು ಮತ್ತೊಬ್ಬರನ್ನು ಎತ್ತುವುದು ಮೇಲೇರುವುದು ನೃತ್ಯಗಾರ್ತಿಯರನ್ನು ಗರಿಗಳಂತೆ ತಲೆಯಿಂದ ಮೇಲಕ್ಕೆ ಲೀಲಾಜಾಲವಾಗಿ ಎತ್ತಿ ನೃತ್ಯ ಮಾಡುವ ಪರಿ ನಯನಮನೋಹರವಾಗಿರುತ್ತದೆ. ಕಾಲನ್ನು ಸಂಪೂರ್ಣವಾಗಿ ಮೇಲೆ ಎತ್ತುವುದು, ಬೆರಳು ಅಥವಾ ಹಿಮ್ಮಡಿಯ ತುದಿಯ ಮೇಲೆ ನೇರವಾಗಿ ನಿಲ್ಲುವುದು ಇವೆಲ್ಲ ಶರೀರದ ಸ್ವಾಭಾವಿಕ ತಿರುಗುವಿಕೆಯಿಂದ ಭಿನ್ನವಾದುದರಿಂದ ತುಂಬ ಕಷ್ಟಕರವಾದವು. ಇವಕ್ಕೆ ಶ್ರೇಷ್ಠಮಟ್ಟದ ತಂತ್ರಾತ್ಮಕ ಕೌಶಲ ಬೇಕಾಗುತ್ತದೆ. ಬ್ಯಾಲೆ ನೃತ್ಯಗಾರರು ಹಾಕುವ ಹೆಜ್ಜೆ ಅದರ ಹಿನ್ನೆಲೆಯಲ್ಲಿರುವ ಲಯದ ಮೇಲಿನ ಪ್ರಭುತ್ವ ಮೆಚ್ಚುವಂತಿರುತ್ತದೆ. ನೃತ್ಯಗಾರರು ಕೋಪ ಹೆದರಿಕೆ ಅಸೂಯೆ ದುಃಖ ಸಂತೋಷ ಮುಂತಾದ ರಸಭಾವಗಳನ್ನು ಮುಖಭಾವ ಮತ್ತು ಶರೀರದ ಸುಂದರವಾದ ಆಯ ಆಕಾರಗಳಿಂದ ಚಿತ್ರ-ವಿಚಿತ್ರ ವಿನ್ಯಾಸಗಳಿಂದ ಚಿತ್ರಿಸುತ್ತಾರೆ. ಮಂದಗಮನ ದುಃಖ ಪ್ರದರ್ಶನಕ್ಕಾದರೆ ತೀವ್ರತೆ ಕೋಪಕ್ಕೆ, ನಿಧಾನವಾಗಿ ಹಾರುವಿಕೆ ಸಂತೋಷಕ್ಕೆ ಇರುತ್ತವೆ. 1920ರಿಂದ ಈ ನೃತ್ಯಕ್ಕೆ ಸ್ವರಪ್ರಸ್ತಾರ (ನೋಟೇಶನ್) ಹಾಕುವ ಕ್ರಮ ರೂಢಿಗೆ ಬಂದಿದೆ. ಇದನ್ನು ಲ್ಯಾಬೋ ನೊಟೇಶನ್ ಎಂದು ಕರೆಯುತ್ತಾರೆ. ಇದನ್ನು ಪ್ರಾರಂಭಿಸಿದವ ರುಡಾಲ್ಫ್ ವಾನ್ ಲ್ಯಾಬನ್. ಈತ ನರ್ತನರಚನಕಾರ ಮತ್ತು ಬ್ಯಾಲೆಯ ಉಪಾಧ್ಯಾಯ.

	ರಷ್ಯಾದಲ್ಲಿ: ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ಯೂರೊಪಿನ ಹಲವು ದೇಶಗಳಿಗೆ ತೆರಳಿ ಬ್ಯಾಲೆ ತಂಡಗಳು ಪ್ರದರ್ಶನ ನೀಡತೊಡಗಿದುವು. ಟಾಗ್ಲಿಯೋನಿ ನೃತ್ಯದಿಂದ ರಷ್ಯಾದ ಜನತೆ ಪ್ರಭಾವಿತರಾಗಿದ್ದರು ಫ್ರಾನ್ಸಿನ ಬ್ಯಾಲೆ ತಜ್ಞ ಉಪಾಧ್ಯಾಯರು ರಷ್ಯಾದಲ್ಲಿ ತರಗತಿಗಳನ್ನು ಪ್ರಾರಂಭಿಸಿದರು. ಬರುಬರುತ್ತ ಇಟಲಿಯ ನೃತ್ಯಗಾರರು ರಷ್ಯಾಕ್ಕೆ ಬಂದು ಹೊಸ ಕ್ರಾಂತಿ ಎಬ್ಬಿಸಿದರು. ರಷ್ಯಾದ ಸೇಂಟ್ ಪೀಟರ್ಸ್‍ಬರ್ಗಿನ ಇಂಪೀರಿಯಲ್ ಬ್ಯಾಲೆ ಕಂಪನಿಯ ಪೆತಿಪಾ ಹೆಂಗಸರಿಗೆ ಶ್ರೇಷ್ಠಮಟ್ಟದ ಬ್ಯಾಲೆ ತಂತ್ರದಲ್ಲಿ ತರಬೇತಿ ನೀಡಿದರು. ಈ ಕಂಪನಿ ಶ್ರೇಷ್ಠಮಟ್ಟದ ಬ್ಯಾಲೆನೃತ್ಯಗಾರರನ್ನು ನೀಡಿದೆ. ಕರುಣರಸ ಪ್ರದರ್ಶನದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಅನ್ನಾ ಪಾವ್ಲೊವಾ ಪ್ರೇಕ್ಷಕರಲ್ಲಿ ಮಿಂಚು ಸಂಚರಿಸುವಂತೆ ಮಾಡುವ ತನ್ನದೇ ಆದ ಅಭಿವ್ಯಕ್ತಿ ಸಾಮಥ್ರ್ಯ ಮತ್ತು ಕಲಾತ್ಮಕ ನೆಗೆಯುವಿಕೆ ಹಾರುವಿಕೆಯುಳ್ಳ ವಾಸ್ಲಾವ್ ನಿಜಿನಿಸ್ಕಿ ಇವರೆಲ್ಲ ಈ ಕಂಪನಿಯ ಶ್ರೇಷ್ಠ ರತ್ನಗಳು. ಮೈಕೇಲ್ ಪೋರ್ಕಿನೆ ರಷ್ಯಾದ ಮೊದಲ ಕೋರಿಯಾಗ್ರಫರ್. ಸಂಗೀತ ನೃತ್ಯ ಮತ್ತು ಬಣ್ಣಗಾರಿಕೆಯಲ್ಲಿ ಹೆಸರುಗಳಿಸಿದ ಈತನ ಪ್ರಸಿದ್ಧ ಬಯಾಲೆಗಳು-ಪ್ರಿನ್ಸ್ ಇಗೋರ (1909), ದಿ ಫೈರ್ ಬರ್ಡ್ (1910), ಪೆಟ್ರೋಚ್ಕ (1911). ಪೆಟ್ರೋಚ್ಕ ಬ್ಯಾಲೆಯಲ್ಲಿ ಗೊಂಬೆಗಳಿಗೆ ಜೀವಬರುವ ಕಥೆಯನ್ನು ಹೊಸ ನಮೂನೆಯ ಸಂಗೀತ, ನೃತ್ಯ ವೇಷಭೂಷಣಗಳಿಂದ ನಾಟಕೀಯ ಅಭಿವ್ಯಕ್ತಿಯಿಂದ ಪ್ರದರ್ಶಿಸಿದ್ದು ಹೊಸತಿರುವಿಗೆ ನಾಂದಿಯಾಯಿತು. ಮೈಕೇಲ್ ಫೋರ್ಕಿನ್‍ನಿಂದ ಪುರುಷ ನೃತ್ಯಗಾರರು ಪುನಃ ಪ್ರಾಧಾನ್ಯ ಪಡೆಯುವಂತಾದರು. ಇಟಾಲಿಯನ್ ಸಂಗೀತಗಳಲ್ಲಿ ನಿಷ್ಣಾತನಾದ ಜೈಕಾವಸ್ಕಿ ಪ್ರತಿಭಾವಂತ ಬ್ಯಾಲೆರಚನಕಾರ. ಅವನ ಹಂಸಸರೋವರ ಮತ್ತು ನಿದ್ರಾಸುಂದರಿ ಜಗತ್ಪ್ರಸಿದ್ಧವಾಗಿವೆ. ಹಂಸಸರೋವರ 1876ರಲ್ಲಿ ರಚಿತವಾಯಿತು. ಈ ನೃತ್ಯಕ್ಕೆ ಸಾಂಪ್ರದಾಯಿಕ ಸಂಗೀತ ಅಳವಡಿಸಿದ್ದಾನೆ. ನಿದ್ರಾಸುಂದರಿ, ಅಡಕತ್ತರಿ ಬ್ಯಾಲೆಗಳಲ್ಲಿ ಅಂತರಂಗದ ಭಾವಾವೇಶಗಳನ್ನು ಅನನ್ಯವಾಗಿ ಹೊರಹೊಮ್ಮಿಸಿದ್ದಾನೆ. ಪ್ರಸಿದ್ಧನರ್ತಕಿ ಅನ್ನಾಪಾವ್ಲೊವಾ ಹತ್ತಾರು ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿ ಬ್ಯಾಲೆಯ ಪ್ರಚಾರದಲ್ಲಿ ಗಮನಾರ್ಹೆ ಕೆಲಸಮಾಡಿದ್ದಾಳೆ. 'ಡೈಯಿಂಗ್ ಸ್ವಾನ್ ಇವಳ ಪ್ರಸಿದ್ಧ ಬ್ಯಾಲೆ. ವಾಸ್ಲಾವ್ ನಿಜಿನಿಸ್ಕಿ ಹೆಜ್ಜೆಹಾಕುವವಿಧಾನ ಅದ್ಭುತವಾದದ್ದು. ಭವ್ಯವಾದ ಕಸುವುಳ್ಳ ಪೌರುಷಪೂರ್ಣವಾದ ಈತನ ಹೆಜ್ಜೆ ಎಲ್ಲ ಕಾಲಕ್ಕೂ ನಿತ್ಯನೂತನ.

	ಅಮೆರಿಕಾದಲ್ಲಿ: 1920-30ರ ದಶಕದಲ್ಲಿ ರಷ್ಯಾದ ಬ್ಯಾಲೆ ಅಧ್ಯಾಪಕರು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬ್ಯಾಲೆ ಶಾಲೆಗಳನ್ನು ತೆರೆದು ತರಬೇತಿ ನೀಡತೊಡಗಿದ್ದರು. ಮುಂದೆ ಅಮೆರಿಕದ ಅವರ ಶಿಷ್ಯರು ಪ್ರಭಾವಶಾಲಿ ಮತ್ತು ಪರಿಣಾಮಕಾರಿಯಾಗಿ ಅದನ್ನು ಪ್ರಚಾರಕ್ಕೆ ತಂದುದರಿಂದ ಇಂದು ಬ್ಯಾಲೆ ಅಲ್ಲಿ ಪ್ರಸಿದ್ಧಿಯಲ್ಲಿದೆ. ಶಾಲಾ-ಕಾಲೇಜುಗಳಲ್ಲೂ ಇದರ ಅಧ್ಯಯನಕ್ಕೆ ಅವಕಾಶವಿದೆ. ಮಾರ್ಗೋಟ್ ಫೋಂಟೈನ್ ಅಮೆರಿಕದ ಪ್ರಸಿದ್ಧ ನೃತ್ಯಗಾರ್ತಿ. ಕೊಂಚವೂ ಶ್ರಮವಿಲ್ಲದೆ, ಬಿಡುವಿಲ್ಲದೆ ನೃತ್ಯ ಮಾಡುವ ಈಕೆಯ ತಂತ್ರ ಅನನ್ಯವಾದುದು. ಭಾರತೀಯ ತಂದೆ, ಸ್ಕಾಟಿಷ್ ತಾಯಿಯ ಮಗಳಾದ ಮರಿಯಾ ತಲ್ಜಿಫ್ ನೃತ್ಯಮಾಡುವಾಗಿನ ಅಸಾಧಾರಣ ಗಾಳಿಯನೆಗೆತ, ಮನೋ ಹರವಾದ ಕಸರತ್ತಿನಿಂದ ಕೂಡಿದ ಈಕೆಯ ಚಲನವಲನಗಳಿಂದ ಪ್ರೇಕ್ಷಕರ ಮನಸ್ಸನ್ನು ಸೊರೆಗೊಳ್ಳುವುದು ಈಕೆಯ ನೃತ್ಯದ ವಿಶೇಷತೆ. ಅಂದ್ರೆ ಎಗ್ಲಿವಸ್ಕಿ ಜಾನ್ ಕ್ರಿಜಾ ಇವರೆಲ್ಲ ಅಮೆರಿಕದ ಪ್ರಸಿದ್ಧ ಬ್ಯಾಲೆ ನರ್ತಕ-ನರ್ತಕಿಯರು. 1942 ಅಕ್ಟೋಬರ್ 16ರಿಂದ ನವ್ಯ ಬ್ಯಾಲೆ ಪ್ರದರ್ಶನ ಪ್ರಾರಂಭವಾಗಿದೆ. ಮೊದಲ ನವ್ಯಬ್ಯಾಲೆ ಗೋವನಿತೆಯ ಪ್ರದರ್ಶನವೇ ಮುಖ್ಯ ವಸ್ತುವಾಗುಳ್ಳ ರೋಡಿವೊ. ಇದರ ನೃತ್ಯಗಾರ್ತಿ ಅಗ್ನೆಸ್ ಡಿ ಮಿಲೆ. ಈಕೆ ದನಗಾಯಿಯ ಪ್ರಧಾನ ಪಾತ್ರ ನಿರ್ವಹಿಸಿ ನವ್ಯಬಾಲೆಯ ಮೊದಲ ನೃತ್ಯಗಾರ್ತಿಯಾದಳು. ಈಕೆಯ ಇತರ ಬ್ಯಾಲೆಗಳು ಓಕ್ಲಹೋಮ, ಮತ್ತು ತತೌಸೆಲ್ (ಪಾನೋತ್ಸವ). ಇತರ ದೇಶಗಳಲ್ಲಿ ಅಮೆರಿಕಾ, ರಷ್ಯಾ, ಫ್ರಾನ್ಸಿನಷ್ಟು ವ್ಯಾಪಕವಾಗಿ ಬ್ಯಾಲೆಯ ಪ್ರಯೋಗ ಇಂದು ನಡೆಯುತ್ತಿಲ್ಲ. ಆದರೆ ಪ್ರಸಾರ ಹಿಂದಿಗಿಂತ ಅಧಿಕವಾಗಿದೆ. 
ಭಾರತದಲ್ಲಿ: ಬ್ಯಾಲೆಯನ್ನು ಆರಂಭಿಸಿ ಅದಕ್ಕೆ ಅಂತಾರಾಷ್ಟ್ರೀಯ ಖ್ಯಾತಿಗಳಿಸಿಕೊಟ್ಟವರು ಉದಯಶಂಕರ್ ಅವರು. ಚಿತ್ರಕಲೆ ಕಲಿಯಲು ಇಂಗ್ಲೆಂಡಿಗೆ ಹೋದವರು ಬ್ಯಾಲೆ ನರ್ತಕರಾಗಿ ಮರಳಿದರು. ಅನ್ನಾಪಾವ್ಲೊವ್ ಅವರ ಬ್ಯಾಲೆ ತಂಡದಲ್ಲಿ ಒಂಬತ್ತು ತಿಂಗಳಕಾಲ ಪ್ರವಾಸ ಮಾಡಿ ತಂತ್ರ ಕೌಶಲ ಸಂಯೋಜನೆ ಇತ್ಯಾದಿ ನೃತ್ಯದ ಎಲ್ಲ ಸ್ತರಗಳ ಪರಿಚಯ ಪಡೆದು ಶಾಸ್ತ್ರೀಯ ತಳಹದಿಯ ಮೇಲೆ ಭಾರತೀಯ ಬ್ಯಾಲೆಯನ್ನು ಆರಂಭಿಸಿದರು. ರಾಧಾಕೃಷ್ಣ ಎಂಬ ಬ್ಯಾಲೆಯನ್ನು ತಮ್ಮ ಗುರು ಅನ್ನಾಪಾವ್ಲೊವ್ ಅವರೊಂದಿಗೆ ಸೇರಿ ವ್ಯವಸ್ಥೆಗೊಳಿಸಿದರು. ಜೀವನ ಸ್ಪಂದನ ಎಂಬ ಬ್ಯಾಲೆಯನ್ನು ಅವರೇ ಸ್ವತಃ ಸಂಯೋಜಿಸಿದರು. ಸಾಯುತ್ತಿರುವ ಹಂಸ ಇವರ ಇನ್ನೊಂದು ಲೋಕ ವಿಖ್ಯಾತ ಬ್ಯಾಲೆ. ಅಡ್ಯಾರಿನ ಕಲಾಕ್ಷೇತ್ರದ ರುಕ್ಷ್ಮಿಣೀ ದೇವಿ ಅರುಂಡೇಲ್ ಮತ್ತು ಅಹಮದಾಬಾದಿನ ಮೃಣಾಲಿನಿ ಸಾರಾಭಾಯಿ ಭಾರತೀಯ ಕಥಾ ವಸ್ತುವುಳ್ಳ ಬ್ಯಾಲೆಗಳನ್ನು ಪ್ರದರ್ಶಿಸಿದ್ದಾರೆ. ಮಾಯಾರಾವ್ ರಷ್ಯಾದಲ್ಲಿ ಬ್ಯಾಲೆ ತರಬೇತಿ ಪಡೆದು ಈಗ (1984) ಭಾರತದಲ್ಲಿ ಬ್ಯಾಲೆ ತರಬೇತಿ ನೀಡುತ್ತಿದ್ದಾರೆ. ಇವರು ಶ್ರೀರಾಮಾಯಣದರ್ಶನಂ ಮತ್ತು ಹೊಯ್ಸಳೇಶ್ವರ ಎಂಬ ಎರಡು ಬ್ಯಾಲೆಗಳನ್ನು ವ್ಯವಸ್ಥೆಗೊಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಳ್ಳುತ್ತಿರುವ ಬ್ಯಾಲೆಯನ್ನು ಎಲ್ಲ ಬಗೆಯ ಶಾಸ್ತ್ರೀಯ ನೃತ್ಯಗಳಲ್ಲೂ ಕೆಲವು ಬಗೆಯ ಜಾನಪದನೃತ್ಯಗಳಲ್ಲೂ ಅದರ ಸಾಂಪ್ರದಾಯಿಕ ತಂತ್ರ, ಕೌಶಲಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಕನ್ನಡದಲ್ಲಿ 1962ರಲ್ಲಿ ಶಿವರಾಮಕಾರಂತರಿಂದ ಯಕ್ಷಗಾನ ಬ್ಯಾಲೆಯ ಪ್ರಥಮ ಪ್ರಯೋಗ ಪ್ರಾರಂಭವಾಯಿತು. ಸೈಂಧವವಧೆ, ಭೀಷ್ಮವಿಜಯ (1962), ರತಿಕಲ್ಯಾಣ, ಬಬ್ರುವಾಹನ ಕಾಳಗ (1963) ಕೃಷ್ಣಾರ್ಜುನ ಕಾಳಗಗಳು (1968) ಯಕ್ಷಗಾನ ಬ್ಯಾಲೆಯ ರೂಪದಲ್ಲಿ ಪ್ರಯೋಗಕ್ಕೆ ಬಂದವು. ಈ ಪ್ರಯೋಗದಿಂದ ಯಕ್ಷಗಾನದಲ್ಲಿ ಕಟ್ಟುನಿಟ್ಟಾದ ಅಭ್ಯಾಸ, ನಿಯಮಬದ್ಧ ತರಬೇತಿ, ವ್ಯವಸ್ಥಿತವಾದ ನಿರ್ದೇಶನ, ಪ್ರೇಕ್ಷಕರ ವಿಮರ್ಶೆ ಮುಂತಾದ ಹೊಸಹೊಸ ಆರೋಗ್ಯಕರ ವ್ಯವಸ್ಥೆಗಳು ಕಾಣಿಸಿಕೊಂಡವು. ಮಾತನ್ನು ದೂರವಿರಿಸಿ, ಮೂಕಾಭಿನಯವನ್ನು ಪರಿಣಾಮಕಾರಿಯಾಗಿ ವಿರೋಚಿತ ಸನ್ನಿವೇಶದಲ್ಲಿ ಜಿಗಿದು ನೆಗೆದಂತೆ, ದುಃಖ ಪ್ರದರ್ಶನದಲ್ಲಿ ಬಗ್ಗಿ-ಕುಗ್ಗಿ ಮುಂದುವರಿಯುವ ನಾನಾ ರೀತಿಯ ಹೊಸ ತಂತ್ರಗಳು ಬಳಕೆಗೆ ಬಂದುವು.
(ಆರ್.ಎಸ್.ಜೆ.)